ಟ್ರೈಕೊಪಿಲಿಯ
	ಆರ್ಕಿಡೇಸೀ ಕುಟುಂಬಕ್ಕೆ ಸೇರಿದ ಒಂದು ಮೂಲಿಕೆ ಸಸ್ಯ. ಇದು ಸುಂದರವಾದ ಹೂಗಳನ್ನು ಬಿಡುವುದರಿಂದಲೂ ಇದರ ಹೂಗಳು ಬಹಳ ಕಾಲ ಗಿಡದಲ್ಲಿ ಮತ್ತು ಕತ್ತರಿಸಿದ ಮೇಲೆ ಬಾಡದೆ ಉಳಿಯುವುದರಿಂದಲೂ ಜನಪ್ರಿಯವಾಗಿದೆ. ಗ್ರೀಕ್ ಭಾಷೆಯಲ್ಲಿ ಟ್ರೈಕೊಪಿಲಿಯ ಎಂದರೆ ಕೂದಲು ಮತ್ತು ಟೋಪಿ ಎಂದು ಅರ್ಥ. ಟ್ರೈಕೊಪಿಲಿಯದ ಪರಾಗಕೋಶ ಒಂದು ಟೋಪಿಯಿಂದ ಆವೃತವಾಗಿದೆ. ಟೋಪಿಯ ಮೇಲ್ಭಾಗದಲ್ಲಿ ಕೂದಲುಗಳು ಮೂರು ಗುಂಪಿನಲ್ಲಿವೆ. ಮೆಕ್ಸಿಕೊ ಮತ್ತು ಕ್ಯೂಬದಿಂದ ಹಿಡಿದು ಬ್ರಜಿûಲ್‍ನ ವರೆಗೂ ಇದರ ವ್ಯಾಪ್ತಿ ಉಂಟು. ಇದನ್ನು ಅಲಂಕಾರಕ್ಕೋಸ್ಕರವಾಗಿ ಅಪ್ಪು ಸಸ್ಯ, ಶಿಲಾಸಸ್ಯ, ಕುಂಡಸಸ್ಯ ಹಾಗೂ ತೂಗುಸಸ್ಯವಾಗಿ ಬೆಳೆಸುವರು. ಇದರಲ್ಲಿ ಸುಮಾರು 20 ಪ್ರಭೇದಗಳಿವೆ. ಇವುಗಳಲ್ಲಿ ಅನೇಕವು ಅಪ್ಪು ಸಸ್ಯಗಳು ಇಲ್ಲವೆ ನಕಲಿ ಲಶುನಸಸ್ಯಗಳು. ನಕಲಿ ಲಶುನಗಳು ಉದ್ದ ಹಾಗೂ ಚಪ್ಪಟೆಯಾಗಿವೆ. ಇವುಗಳ ತುದಿಯಲ್ಲಿ ಒಂದೊಂದು ಎಲೆ ಉಂಟು. ಎಲೆಯ ಬುಡದಲ್ಲಿ ಒಣಗಿದ ಶಲ್ಕಗಳಿವೆ. ಎಲೆಗಳು ದೊಡ್ಡವು, ಮೃದುವಾಗಿದೆ. ಹೂಗಳು ನೆಲದ ಮೇಲೆ ಹರಡಿಕೊಂಡಿರುವ ಮೊಟಕಾದ ಕಾಂಡದ ಮೇಲೆ ಅರಳುವುವು. ಪುಷ್ಪಪತ್ರಗಳು ಮತ್ತು ದಳಗಳು ಸುರುಳಿಯಂತೆ ಸುತ್ತಿಕೊಂಡಿವೆ. ಹೂವಿನ ಪ್ರಮುಖ ಭಾಗವಾದ ಲೇಬೆಲಮ್ ದೊಡ್ಡದಾಗಿದೆ. ಇದು ಮಧ್ಯದ ಸ್ತಂಭಕ್ಕೆ ಅಂಟಿಕೊಂಡಿದೆ. ಟ್ರೈಕೊಪಿಲಿಯದ ಪ್ರಮುಖ ಪ್ರಭೇದಗಳು : ಗ್ಯಾಲೊಟಿಯಾನ, ಫ್ರೇಗ್ರನ್ಸ್, ನೋಬೆಲಿಸ್, ಟಾರ್ಟಿಲಸ್, ಮಾರ್ಜಿನೇಟ ಮತ್ತು ಕ್ರಿಸ್ಟ. 
(ಬಿ.ಎ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ